Friday, March 19, 2010
ಮಾಲಿನಿ ಜಯಶಾಲಿ ನೀ..!
ನಾಲ್ಕು ವರ್ಷಗಳ ಹಿಂದೆ...
ದುಡಿಯಬೇಕೆನ್ನುವ ಮನಸ್ಸಿದೆ. ಸರಿಯಾಗಿ ಶ್ರಮಿಸಿದರೆ ಬದುಕು ಕಟ್ಟಿಕೊಳ್ಳುವುದಕ್ಕೆ ಪುಟ್ಟ ಜಮೀನೂ ಇದೆ... ಅಲ್ಲಿ ನೀರಿಲ್ಲ.. ಏನನ್ನೂ ಬೆಳೆಯುವ ಹಾಗಿಲ್ಲ. ಕೈಯಲ್ಲಿ ಹಣವಿಲ್ಲ ... ಏನನ್ನೂ ಮಾಡುವ ಹಾಗಿಲ್ಲ... ಎಲ್ಲ ಸಣ್ಣ ರೈತರಂತೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲ್ಲೂಕಿನ ಅಟಬೈಲ್ ನ ಶ್ರೀಮತಿ ಮಾಲಿನಿ ನಾಯಕ್ ಕೂಡ ತುಂಬ ನೊಂದಿದ್ದರು. ಎಲ್ಲೆಲ್ಲೀ ಕೂಲಿ ಮಾಡುತ್ತ ಜೀವನ ನಿರ್ವಹಣೆ ಮಾಡುತ್ತಿರುವ ಇವರ ಬಳಿ ಈ 1.5 ಎಕ್ರೆ ಜಮೀನನ್ನು ಉದ್ಧಾರ ಮಾಡುವಷ್ಟು ದೊಡ್ಡ ಥೈಲಿಯೇನೂ ಇರಲಿಲ್ಲ. ಯಾವ ಬ್ಯಾಂಕುಗಳೂ ಸಹ ಇವರದ್ದು ಅತಿಕ್ರಮಣ ಜಮೀನು ಎಂಬ ಕಾರಣಕ್ಕೆ ಸಾಲ ನೀಡಲಿಲ್ಲ. ಮೂರು ಎಳೆ ಮಕ್ಕಳು, ಪತಿ, ಪತ್ನಿ ಇರುವ ಈ ಸಂಸಾರವನ್ನು ತೂಗಿಸಿಕೊಂಡು ಹೋಗುವುದೇನೂ ಸಣ್ಣ ಸಂಗತಿಯಲ್ಲವಲ್ಲಾ...
ಆಮೇಲೇನಾಯ್ತೆಂದರೆ...
ರಾಜ್ಯದಲ್ಲೆಲ್ಲೆಡೆ ಗ್ರಾಮೀಣಾಭಿವ್ರದ್ದಿಯ ಹೊಸ ಶಕೆಯನ್ನೇ ಶುರು ಮಾಡಿದ ಧರ್ಮಸ್ಥಳ ಗ್ರಾಮಾಭಿವ್ರದ್ಧಿ ಯೋಜನೆ 2006 ನೇ ಇಸ್ವಿಯಲ್ಲಿ ಇವರ ಊರಿಗೂ ಬಂತು. ಸ್ವತಃ ಈ ಸಂಘಟನೆಯಲ್ಲಿ ಸೇರಲು ಮುಂದಾದರು. ಅಕ್ಕ ಪಕ್ಕದ ಮಹಿಳೆಯರನ್ನೆಲ್ಲಾ ಒಟ್ಟು ಸೇರಿಸಿದರು. ಯೋಜನೆಯ ಸೇವಾನಿರತರ ಸಲಹೆಯನ್ನು ಪಡೆದರು. ಇಷ್ಟು ದಿನ ಕೆಲಸವನ್ನು ಮಾಡಲು ತೊಡಕಾಗಿದ್ದ ಆರ್ಥಿಕ ಸಮಸ್ಯೆಯನ್ನು ಸಂಘದಿಂದ ಸಿಕ್ಕ 2000 ರೂಪಾಯಿ ಪ್ರಗತಿ ನಿಧಿಯಿಂದ ಕೊಂಚ ಮಟ್ಟಿಗೆ ನಿವಾರಿಸಿಕೊಂಡರು. ಖುಷಿಯಾಗುವಷ್ಟು ಕೆಲಸಗಳಾದವು. ಮತ್ತೆ ಹತ್ತು ಸಾವಿರ ರೂಪಾಯಿಗಳ ಪ್ರಗತಿನಿಧಿಯನ್ನು ಅಲ್ಲಿಂದಲೇ ಪಡೆದು ಬಾವಿಯನ್ನು ತೋಡಿದರು.
ತರಕಾರಿ, ಬಾಳೆ, ಕಬ್ಬು, ಅಡಿಕೆ ಇತ್ಯಾದಿ.....
ಇಲ್ಲಿಂದ ಶುರುವಾಯಿತು ನೋಡಿ, ಮಾಲಿನಿಯವರ ವಿಜಯ ಯಾತ್ರೆ! ಬಾವಿಯ ನೀರನ್ನು ಬಳಸಿಕೊಂಡು ತಮ್ಮ ಜಮೀನಿನಲ್ಲಿಯೇ ವಿವಿಧ ತರಕಾರಿಗಳನ್ನು ಬೆಳೆದರು. ಇವರು ವಿನಿಯೋಗಿಸಿದ ಶ್ರಮಕ್ಕೆ ಮೋಸವಾಗಲಿಲ್ಲ. ಪಕ್ಕದ ಊರುಗಳಲ್ಲಿ ತರಕಾರಿಗಳನ್ನು ಮಾರಾಟ ಮಾಡುವುದರಿಂದ ವಾರದ ಕಿರು ಆದಾಯ ಶುರುವಾಯಿತು. ಉಳಿತಾಯದ ಕಡೆಗೆ ಗಮನವಿಟ್ಟಷ್ಟೇ ಅದಾಯವನ್ನು ಹೆಚ್ಚಿಸಿಕೊಳ್ಳುವ ಕಡೆಗೂ ಗಮನ ಹರಿಸಿದರು. ಅಗತ್ಯವಿದ್ದಾಗಲೆಲ್ಲಾ ಲ ದ.ಗ್ರಾ .ಯೋ. ದ ಸೇವಾನಿರತರ ಸಲಹೆಯನ್ನು ಕೇಳಿದರು. 100 ಅಡಿಕೆ ಗಿಡವನ್ನು ನೆಟ್ಟರು. 500 ಬಾಳೆ ಕಂದುಗಳನ್ನು ತಂದು ಹೊಲದಲ್ಲಿ ಊರಿದರು. 0.2 ಎಕರೆಗಳಷ್ಟು ಜಾಗದಲ್ಲಿ ಕಬ್ಬನ್ನೂ ಬೆಳೆದರು. ಉಳಿದ ಜಾಗದಲ್ಲಿ ಭತ್ತವನ್ನು ಬೆಳೆದರು; ಗೆದ್ದರು.ಯಾಕೆಂದರೆ ಇವರು ಬೇಸಿಗೆಯಲ್ಲಿ ಹೊಲವನ್ನು ಖಾಲಿ ಬಿಡುವುದಿಲ್ಲ. ಭತ್ತದ ಕೊಯ್ಲಿನ ನಂತರ ತರಕಾರಿಗಳನ್ನ ಬೆಳೆಯುತ್ತಾರೆ. . ಈ ಎಲ್ಲ ಕಾರಣಗಳಿಂದ... 2009ನೇ ಇಸ್ವಿಯಲ್ಲಿ ದ. ಗ್ರಾ .ಯೋ ಅನಿಷ್ಠಾನಗೊಳಿಸುತ್ತಿರುವ ಸಾವಯವ ಗ್ರಾಮ ಯೋಜನೆಯಲ್ಲಿ ಆಯ್ಕೆಯಾಗಿದ್ದಾರೆ . ಸಾವಯವ ಚಟುವಟಿಕೆಯಲ್ಲಿ ಸುಧಾರಿತ ಕಾಂಪೋಸ್ಟ್, ಜೀವಾಮೃತ ಚಟುವಟಿಕೆಗಳನ್ನು ಅಳವಡಿಸಿಕೊಂಡು ಕೃಷಿಯನ್ನು ಮಾಡುತ್ತಿದ್ದಾರೆ. ಜೀವಾಮೃತ ಮಡುವುದೆಂದರೆ ಅವರಿಗೆ ಅಚ್ಚು ಮೆಚ್ಚು. ಸದ್ಯಕ್ಕೆ ಸಾವಯವಪದ್ಧತಿಯಲ್ಲಿ ಅಡಿಕೆ, ಬಾಳೆ, ತರಕಾರಿ, ಭತ್ತ, ದ್ವಿದಳ ಧಾನ್ಯಗಳನ್ನು ನಾಟಿ ಮಾಡಿದ್ದಾರೆ. ಸಾವಯವದಲ್ಲಿ ತರಕಾರಿ ಸಮೃದ್ಧಿ ಬೆಳೆದಿರುವುದನ್ನು ಕಂಡು ಇವರ ಮನಸ್ಸು ಹಿಗ್ಗುತ್ತದೆ.
ಕೈಲಿರುವ ಥೈಲಿ ತುಂಬುತ್ತಿದೆ ನೋಡಿ...
ಸೂಕ್ತ ಮಾರ್ಗದರ್ಶನ ಸಿಕ್ಕಿದ್ದಕ್ಕಾಗಿ ಈ ವರ್ಷ ಬಾಳೆಯಿಂದ 25000ರೂಪಾಯಿ, ಭತ್ತದಿಂದ ರೂ.8ಸಾವಿರ ರೂಪಾಯಿ, ತರಕಾರಿಯಿಂದ ರೂ.5ಸಾವಿರ ರೂಪಾಯಿ, ಹಾಗೂ ಕಬ್ಬಿನಿಂದ ರೂ. 10ಸಾವಿರಗಳ ಆದಾಯವನ್ನು ಪಡೆದಿದಾ್ದರೆ. ಇಂದು...ಸಿಕ್ಕ ನೆರವನ್ನು ಸದುಪಯೋಗ ಪಡಿಸಿಕೊಂಡು ಹೇಗೆ ಬದುಕನ್ನು ಕಟ್ಟಿಕೊಳ್ಳಬಹುದೆಂಬುದಕ್ಕೆ ಇವರೊಂದು ಮಾದರಿಯಾಗಿದ್ದಾರೆ. ಈ ಬೆಳವಣಿಗೆಯ ಕಥೆಯನ್ನು ಬಿಡಿಸಿಡುತ್ತಾ ಹರ್ಷದ ನಗುವನ್ನು ಬೀರುತ್ತಾರೆ.. -ನಾಗರಾಜ. ವೈದ್ಯ.
Subscribe to:
Post Comments (Atom)
No comments:
Post a Comment