Friday, March 19, 2010

ಬೇಕಾಗಿದ್ದಾರೆ , ಹರುಕು ಬಾಯಿಗೆ ಹೊಲಿಗೆ ಹಾಕುವವರು!


‘ನೀನಮ್ಮಾ .. ನೀನು ಹೇಗೆ ಮನೇಲಿ ಅಪ್ಪ ಅಮ್ಮಂಗೆ ಫೂಸಿ ಹೊಡೆದು ಬಾಯ್‌ಪ್ರೆಂಡ್‌ಜೊತೆಗೆ ಸುತಾ್ತಡೋಕೆ ಹೋಗ್ತೀಯಾ.. ? ಅತ್ತ ಕಡೆಯಿಂದ ಎಂ.ಜಿ ರಸ್ತೆಯಿಂದ ಮಾತಾಡುತ್ತಿರುವ ಧ್ವನಿ.. ನಾನು ನಮ್ಮಪ್ಪಂಗೆ ಊರಲ್ಲಿರೋ ಯಾರೋ ಸತ್ತಿದ್ದಾರೆ ಅಂತ್ಹೇಳಿ ಅವನ ಜೊತೆ ನಾಲ್ಕು ದಿನ ಸುತ್ತಾಡ್ಕೊಂಡು ಬರ್ತೀನಿ.. ಇತ್ತ ಹರುಕು ಬಾಯಿಯ ರೇಡಿಯೋ ಜಾಕಿ. ಓಕೆ..ಪೈನಮ್ಮಾ .. ತುಂಬಾ ಚೆನ್ನಾಗಿ ಸುಳ್ಳು ಹೇಳ್ತೀಯ.. ನಿನಗೋಸ್ಕರ ಒಂದು ಬ್ಯೂಟಿಫುಲ್‌ ಟ್ರ್ಯಾಕ್..’ ಇದು ಇತ್ತೀಚಿಗೆ ನಗರದ ಎಫ್‌ .ಎಂ ವಾಹಿನಿಯೊಂದರಲ್ಲಿ ಕೇಳಿದ ಸಂಭಾಷಣೆ. ಈ ವಾಹಿನಿಗಳು ಏನನ್ನು ಸಾಧಿಸಲು ಹೊರಟಿವೆ ಎಂಬ ಪ್ರಶ್ನೆ ಸುಮ್ಮನೇ ಮನಸಿನಲ್ಲಿ ಸುಳಿದಾಡಿತು.
ಅಷ್ಟಕ್ಕೂ ಯಾವಾಗಲೂ ಕೈಯಲ್ಲಿ ವೊಬೈಲ್, ಜೇಬಿನಲ್ಲಿ ಅದರ ಹೆಡ್ಪೋನ್‌ ಇಟ್ಟುಕೊಳ್ಳುತ್ತೇನಾದರೂ ಒಂದೇ ಒಂದು ದಿನವೂ ಎಫ್.ಎಂ. ಕೇಳಲು ಮನಸಾಗುವುದಿಲ್ಲ. ಬೆಂಗಳೂರಿನ ಸಂದಣಿಯಲ್ಲಿ ವಾಹನದ ಸದ್ದು ಕೇಳಿ ಕೇಳಿ ಕಿವಿಯ ತಮಟೆ ಹರಿದು ಹೋದೀತು. ಹಾಡನ್ನಾದರೂ ಕೇಳಿ ಮುದಗೊಳ್ಳುವಾ ಎಂದು ಭಾವಿಸಿ ಎಫ್‌.ಎಂ ಗಳಿಗೆ ಕಿವಿಯಿಟ್ಟರೆ ಬಾಣಲೆಯಿಂದ ಬೆಂಕಿಗೆ ಅನ್ನುತ್ತಾರಲ್ಲಾ..ಪಕ್ಕಾ ಅನುಭವವಾಗುತ್ತದೆ. ಕಿವಿ ಹರಿದು ಹೋಗುತ್ತದೆ. ಕೂಡಲೇ ಹೆಡ್‌ಪೋನ್‌ ಕಿತ್ತೆಸೆಯುವಾ ಅನ್ನಿಸುತ್ತದೆ. ಅಲ್ಲಿಯ ಕಿರುಚಾಟ, ಹಲುಬಾಟಗಳು ಆ ಪರಿಯಲ್ಲಿ ರೇಜಿಗೆ ಹುಟ್ಟಿಸುತ್ತವೆ.!
ಬೆಂಗಳೂರಿನಲ್ಲಿಯೇ ಹನ್ನೊಂದು ಎಫ್‌.ಎಂ ಕೇಂದ್ರಗಳಿವೆ. ಇವುಗಳಲ್ಲಿ ಏಳು ಚಾನಲ್‌ಗಳಂತೂ ಇಡೀ ಬೆಂಗಳೂರು ನಗರದಲ್ಲಿ ಗದ್ದಲವೇಳಲು ಏನೇನು ಬೇಕೋ ಪ್ರತಿಯೊಂದನ್ನೂ ಮಾಡುತ್ತಿವೆ. ಈ ಚಾನಲ್‌ಗಳಲ್ಲಿ ಕೆಲಸ ಮಾಡುವ ರೇಡಿಯೋಜಾಕಿಗಳು ಅದ್ಯಾವ ಪಾಪ ಮಾಡಿದ್ದಾರೋ... ಆ ಪಾಪದ ಹೊರೆಯನ್ನೆಲ್ಲಾ ಕೇಳುಗರ ಕಿವಿಯಲ್ಲಿ ಸುರುವುತ್ತೊಇದ್ದಾರೆ ಎಂಬುದು ವ್ಯಂಗ್ಯದ ಮಾತಷ್ಟೇ ಅಲ್ಲ. ಇತ್ತೀಚಿಗೆ ಎಫ್‌.ಎಂ ವಾಹಿನಿಯೊಂದರಲ್ಲಿ ಜಾಹೀರಾತೊಂದು ಬರುತ್ತಿದೆ. ಹರಿ ಕೀರ್ತನೆಯ ಸ್ವರೂಪದಲ್ಲಿ ಸಿದ್ಧಪಡಿಸಿದ ಆ ಜಾಹೀರಾತಿನಲ್ಲಿ ಅರ್ಜುನನ ಬಾಯಿಯಿಂದ ಸಿನಿಮಾ ಹಾಡು ಹೇಳಿಸುತ್ತಾರೆ...ಹೇಳದೇನೇ ತಾಳಲಾರೆನೂ... ಅಂಥ ರೂಪಸೀ..ನನ್ನ ಪ್ರೇಯಸಿ...
ರೇಡಿಯೋ ಜಾಕಿಗಳಿಗೆ ಸ್ವಲ್ಪೇ ಸ್ವಲ್ಪವೂ ಸಾಮಾಜಿಕ ಕಾಳಜಿಯೆಂಬುದಿಲ್ಲವಾ ಅನಿಸುತ್ತದೆ ಎಷ್ಟೋ ಸಲ.. ಒಂದೇ ಉಸಿರಿನಂತೆ ಇಂದು ನಾನೂ ನೀನೂ... ಎಂದು ತುಟಿ ಮುಚ್ಚದಂತೆ ಮಾತಾಡಬಲ್ಲಂತವರಿಗೆಲ್ಲಾ ಇಲ್ಲಿದೆ ವೇದಿಕೆ. ಜೊತೆಯಲ್ಲಿ ಕಿಸೆ ತುಂಬುವಷ್ಟು ದುಡ್ಡು. ಇಂದಿಗೂ ಪ್ರಸಾರ ಭಾರತಿ ನಡೆಸಿಕೊಂಡು ಬರುತ್ತಿರುವ ರೇಡಿಯೋ ಚಾನಲ್‌ ಗಳನ್ನು ನೋಡಿ ಇವರು ಪಾಠ ಕಲಿಯಬೇಕು. ಯಾವುದೇ ಪ್ರಕಾರದ ಕಲೆಯಾಗಿರಲಿ, ಹಾಡಿರಲಿ, ಅಲ್ಲಿ ಕಲಾವಿದರಿಗೆ, ಕವಿಗಳಿಗೆ, ಸಂಗೀತಗಾರರಿಗೆ ಗೌರವ ಸಿಗುತ್ತದೆ.ಆದರೆ ಖಾಸಗೀ ಸ್ವಾಮ್ಯದ ವಾಹಿನಿಗಳಿಗೆ ಹೀಗೆ ಗೌರವಿಸುವ ಸೌಜನ್ಯವೂ ಇಲ್ಲ . ಒಂದು ಬ್ಯೂಟಿಫುಲ್‌ ಟ್ರ್ಯಾಕ್ಅನ್ನು ಕೇಳೋಣ.. ಅಂದರೆ ಮುಗಿಯಿತು. ಯಾರು ಹಡೆದ ಕೂಸಿದು... ಯಾಕೆ ಇದು ಬ್ಯೂಟಿಫುಲ್‌ ಹಾಡು.. ಯಾವ ಮಾಹಿತಿಯನ್ನೂ ನೀಡುವುದಿಲ್ಲ.ಅವರಿಗೆ ಗೊತ್ತಿದ್ದರೆ ತಾನೇ ಬೇರೆಯವರಿಗೆ ಹೇಳುವುದು? ಇನ್ನೊಂದೆರಡು ವಾಹಿನಿಗಳಿವೆ. ಅಲ್ಲಿರುವ ಜಾಕಿಗಳ ಹೆಸರುಗಳನ್ನು ಕೇಳಿದರೆನೇ ಮತ್ತೇರುತ್ತದೆ. ಬಿಂದಾಸ್‌ ಬಾಸ್‌ ಅಂತೆ, ಹೈ ವೋಲ್ಟೇಜ್‌ ಅಂತೆ, ಸಕ್ಕತ್‌ ಸಖಿಯಂತೆ.. ತರಹೇವಾರಿ ಅಡ್ಡ ಹೆಸರುಗಳನ್ನಿಟ್ಟು ಪಡ್ಡೆಗಳನ್ನು ದಾಸರನಾ್ನಗಿಸುವ ಹುನಾ್ನರದಲ್ಲಿ ಈ ವಾಹಿನಿಗಳು ಕೇಳುಗರ ಸ್ವಸ್ಥ ಮನಸುಗಳನ್ನು ಕೆರಳಿಸುತ್ತಿರುವುದಂತೂ ಸುಳ್ಳಲ್ಲ. ಹಾಗೆ ನೋಡಿದರೆ ಇವರೆಲಾ್ಲ ಏನನ್ನು ಸಾಧಿಸಲು ಹೊರಟಿದ್ದಾರೋ ಗೊತ್ತಾಗದು . ಹನ್ನೊಂದು ವಾಹಿನಿಗಳು ಇಲ್ಲಿಯೇ ಬೇರು ಬಿಟ್ಟಿರುವುದರಿಂದ ಸಹಜವಾಗಿ ಸ್ಪರ್ಧೆಯೇನೋ ಇರುತ್ತದೆ. ಆದರೆ ಸ್ಪರ್ಧೆ ಗೆಲ್ಲುವ ಭರಾಟೆಯಲ್ಲಿ ಸಾಮಾಜಿಕ ಜವಾಬ್ಧಾರಿಯನ್ನು ಮರೆತರೆ ಹೇಗೆ?ಅವರು ಉತ್ತರಿಸಲಾರರು ಬಿಡಿ. ಇತರೆಲ್ಲಾ ಮಾಧ್ಯಮಗಳಿಗಿಂತ ರೇಡಿಯೋಕ್ಕೆ ಹೆಚ್ಚಿನ ಮಹತ್ವವಿದೆ. ಬಯಸಿದಲ್ಲಿಗೆ ಕೊಂಡೊಯ್ಯಬಹುದು ಎಂಬ ಕಾರಣಕ್ಕಾಗಿಯೇ ಒಂದಾನೊಂದು ಕಾಲದಲ್ಲಿ ರೇಡಿಯೋ ದೊಡ್ಡ ಕ್ರಾಂತಿಯನ್ನೇ ಮಾಡಿತು. ಅದರ ಮುಂದುವರೆದ ರೂಪವಾದ ಎಫ್‌.ಎಂಗಳು ಮಾತ್ರ ಈ ಜವಾಬ್ಧಾರಿಯನ್ನು ಮರೆತಿವೆ ಎಂಬುದು ಎಲ್ಲ ಕೇಳುಗರಿಗೂ ಗೊತ್ತಿರುವ ಸಂಗತಿಯೇ. ಭಾರತಕ್ಕೆ ಎಫ್‌.ಎಂ ವಾಹಿನಿಗಳು ಬರುವಾಗಿನ ಉದ್ದೇಶ ಒಳ್ಳೆಯದೇ ಇತ್ತು. ಮೆಟ್ರೋ ನಗರಗಳಾದ ದೆಹಲಿ, ಮುಂಬೈ, ಕೋಲ್ಕತ್ತಾ , ಚೆನ್ನೈಗಳಲ್ಲಿ ವಾಹಿನಗಳು ವೊದಲು ಶುರುವಾಗಿದ್ದವು. ಗೋವಾದಲ್ಲಿ ಪ್ರವಾಸೀ ಉದ್ದೇಶಕ್ಕಾಗಿ ಈ ಸೌಲಭ್ಯವನ್ನು ಬಳಸಲಾಗಿತ್ತು. ಕ್ರಮೇಣ ಇದನ್ನೇ ಅನುಸರಿಸಿ ಹೈದರಾಬಾದ್ ‌ , ಜೈಪುರ, ಲಖನೌ ಹಾಗೂ ಬೆಂಗಳೂರಿನಲ್ಲೂ ವಾಹಿನಿಗಳು ಶುರುವಾದವು. ಸರಕಾರಕ್ಕೆ ಈ ರೀತಿಯ ವಾಹಿನಿಗಳನ್ನು ಸ್ಥಾಪಿಸಲು ಪರವಾನಿಗೆ ನೀಡುವುದರಿಂದ ಬೊಕ್ಕಸಕ್ಕೆ ಭರ್ತಿ ಹಣ ಬರುವುದರಿಂದ ಪರವಾನಿಗೆ ನೀಡುವುದಕ್ಕೆ ಯಾವ ತೊಡಕನ್ನೂ ಮಾಡುತ್ತಿಲ್ಲ. ಇಲ್ಲಿ ವಾಹಿನಿಗಳು ಶುರುವಾದ ಕಾಲಮಾನವನ್ನೇ ಗಮನಿಸಿ... 2006 ನೇ ಇಸವಿಯೊಂದರಲ್ಲಿಯೇ 5 ವಾಹಿನಿಗಳಿಲ್ಲಿ ಜನ್ಮತಾಳಿದವು ಅಗಸ್ಟ್ನಲ್ಲೊಂದು, ಸೆಪ್ಟೆಂಬರ್‌ನಲ್ಲಿ ಒಂದು, ಆಕ್ಟೋಬರ್ ನಲ್ಲಿ ಇನ್ನೊಂದು ನವೆಂಬರ್‌ ನಲ್ಲಿ ಮತ್ತೊಂದು ಹೀಗೆ ಹುಟ್ಟುತ್ತಲೇ ಹೋದವು. ಮುಖ್ಯವಾಗಿ ಯುವ ಜನತೆಯ ಕಣ್ಮಣಿಗಳಾಗಲು ಪ್ರತಿಯೊಬ್ಬರೂ ತಹತಹಿಸಿದರು. ಹೊಸ ಹೊಸ ವೇಷ ತೊಟ್ಟರು.ಕನ್ನಡ ಭಾಷೆಯ ಮೇಲೆ ಅತ್ಯಾಚಾರ ಮಾಡಿದರು. ತಾವು ಮಾತಾಡುತ್ತಿರುವುದೇ ನಿಜವಾದ ಕನ್ನಡ ಎಂದು ನಂಬಿಸುವಲ್ಲಿಯೂ ಗೆದ್ದರು ! ಯಾವೊಬ್ಬ ಕನ್ನಡಪರ ಹೋರಾಟಗಾರನೂ ಈ ಬಗ್ಗೆ ಮಾತಾಡಲಿಲ್ಲ. ಒಂದೆರಡು ಸಲ ಬಾಯ್ತೆರೆದಂತೆ ಮಾಡಿ ತಮಗೆ ಬೇಕಾಗಿದ್ದು ಈ ವಾಹಿನಿಗಳಿಂದ ಸಂದಾಯವಾಗುತ್ತದೆ ಎಂಬ ಭರವಸೆ ಮೂಡಿದ್ದೇ ತಡ ; ಬಾಯ್ಮುಚ್ಚಿ ಕುಳಿತುಕೊಂಡರು.! ಈ ಸತ್ಯ ಎಲ್ಲರಿಗೂ ಗೊತ್ತಿದೆ.

ಇಂತವರ ಹುಚ್ಚಾಟಗಳಿಂದಾಗಿಯೇ ಇಂದು ಈ ಹಾಳು ಹರಟೆಯನ್ನು, ನಮ್ಮ ನೆಲದ, ನಮ್ಮ ಸಂಸ್ಕೃತಿಯ ಅವಹೇಳನವನ್ನು ಕೇಳುವ ಪರಿಸ್ಥಿತಿ ಎದುರಾಗಿದೆ. ಅರ್ಜುನನ ಬಾಯಲ್ಲಿ ಸಿನಿಮಾ ಹಾಡನ್ನು ಹೇಳಿಸುವ ಮಟ್ಟಿಗೆ ಇವರು ನಮ್ಮ ವಾಹಿನಿಗಳ ಪಿತೃಗಳು ಸುಧಾರಿಸಿದಾ್ದರೆ(?!). ಯಾರನ್ನು ಹೇಗೆ ಬೇಕಾದರೂ ಬಿಂಭಿಸಬಲ್ಲ ಈ ಕ್ರಿಯಾಶೀಲತೆಯ ಪರಮಾವಧಿಗಳಿಗೆ ಲಗಾಮು ಹಾಕುವ ಕಾನೂನುಗಳು ಬೇಕಾಗಿವೆ. ಆದಷ್ಟು ಬೇಗ ಈ ಹರುಕು ಬಾಯಿಗಳನ್ನು ಹೊಲಿಯಲು ನಮ್ಮ ವ್ಯವಸ್ಥೆ ಪರಿವರ್ತನೆಯಾಗಬೇಕಿದೆ. ಯಾವಾಗ ಆಗುತ್ತದೆ ಅಂತ ಮಾತ್ರ ಕೇಳಬೇಡಿ, ಯಾಕೆಂದರೆ ಆಳುವವರಿಗೆ ಆ ಅವಶ್ಯಕತೆ ಬಿಡಿ!

- ನಾಗರಾಜ್‌. ವೈದ್ಯ

No comments:

Post a Comment