Tuesday, April 27, 2010

3ಬಾಗಿಲು,ಮನೆಯೊಂದು....

'...ಎರಡು ಜಡೆಗಳನ್ನು ಮಾತ್ರ ಒಂದೆಡೆ ಸೇರಿಸಲಾಗದು.' ತುಂಬಾ ಹಿಂದಿನಿಂದ ಹೆಣ್ಮಕ್ಕಳ ಕುರಿತು ಕೇಳಿಬರುತ್ತಿರುವ ಮಾತು ಇದು.ಸ್ತ್ರೀಯರಿಬ್ಬರು ಮಾತಾಡಲು ಕುಂತರೆ ಅಲ್ಲಿ ಒಮ್ಮತದ ಅಭಿಪ್ರಾಯ ಮೂಡಲಿಕ್ಕೆ ಸಾದ್ಯವೇ ಇಲ್ಲ.ಅಲ್ಲಿ ಅಸಮಧಾನ ಹುಟ್ಟುತ್ತದೆ.ಜಗಳಕ್ಕೆ ಸಾವಿರ ದಾರಿಗಳು ತೆರೆದುಕೊಳ್ಳುತ್ತವೆ.ಶುರುವಾಗುತ್ತದೆ ವೈರ... ಪರಿಸ್ಥಿತಿ ಎಲ್ಲಿಗೆ ಬಂದು ತಲುಪುತ್ತದೆಂದರೆ ಮನೆ ಮುರಿಯುತ್ತದೆ.ಮನಸ್ಸಿನ ನಡುವೆ ಒಡೆಯಲಾಗದ ಗೋಡೆ... ಇವತ್ತಿನ ವಿಭಕ್ತ ಕುಟುಂಬಗಳ ಹುಟ್ಟಿನ ಕಾರಣಗಳನ್ನು ಹುಡುಕಿದರೆ ಸಿಗುವ ಪ್ರಮುಖ ಅಂಶಗಳಿವು.ಆದರೆ ಶಿರಸಿ ಸಮೀಪದ ಕೊಪ್ಪಲಗದ್ದೆಯ ಗೌಡರ ಮನೆ ಹೊಕ್ಕರೆ ನಮ್ಮ ಅಭಿಪ್ರಾಯಗಳೇ ಬದಲಾಗುತ್ತದೆ.ಎರಡಲ್ಲ,ಹದಿನೈದಕ್ಕೂ ಹೆಚ್ಚಿನ ಹೆಣ್ಣು ಜೀವಗಳು ಸಾಮರಸ್ಯದಿಂದ ಜೀವನ ನಡೆಸುತ್ತಿರುವುದನ್ನು ಕಂಡು ಅರಿವಿಲ್ಲದೆಯೇ ಅಚ್ಚರಿಯ ಉದ್ಘಾರ ಹೊರಡುತ್ತದೆ.ಹೌದು! ಇದು ಬರೇ ಅವಿಭಕ್ತ ಕುಟುಂಬದ ಕತೆಯಾದರೆ ಹೇಳುವ ಅಗತ್ಯವೇ ಇರಲಿಲ್ಲ.ಇಂದಿಗೂ ಮಲೆನಾಡಿನಲ್ಲಿ ಓಡಾಡಿದರೆ ಒಂದಾನೊಂದು ಕಾಲದ ಪಳಯುಳಿಕೆಯಂತೆ ಅಲ್ಲೊಂದು,ಇಲ್ಲೊಂದು ಅವಿಭಕ್ತ ಕುಟುಂಬಗಳು ಸಿಗುತ್ತವೆ.ಆದರೆ ಅಲ್ಲಿಯ ಹೊಂದಾಣಿಕೆಯ ಕುರಿತಾಗಿ ಅಷ್ಟು ಪ್ರಬಲವಾಗಿ ಪ್ರತಿಪಾದಿಸಲಾಗದು.ಕೆಲವೊಮ್ಮೆ ಸಣ್ಣ ಸಣ್ಣ ಸಂಗತಿಗಳೂ ಮನೆ ಮುರಿಯುವ ಕಾರಣವಾಗಿಬಿಡುವುದುಂಟು.ಆದರೆ ಕೊಪ್ಪಲಗದ್ದೆಯ ಕರಿಯಾ ಗೌಡರ ಕುಟುಂಬಸ್ತರು ಮಾತ್ರ ಇದೆಲ್ಲದಕ್ಕೆ ಅಪವಾದವೆನ್ನುವ ರೀತಿಯಲ್ಲಿ ಬದುಕು ನಡೆಸುತ್ತಿದ್ದಾರೆ. ಮೂರು ಪ್ರತ್ಯೇಕ ಕುಟುಂಬಗಳ 39 ಜನರು ಒಂದಾನೊಂದು ಕಾಲದ ರೂಢಿಯಂತೆ ಒಟ್ಟಾಗಿ ಬದುಕುತ್ತಿದ್ದಾರೆ.ಒಂದೇ ಒಂದು ದಿನವೂ ಯಾವುದೇ ಭಿನ್ನಾಭಿಪ್ರಾಯಕ್ಕೆ ಸಿಕ್ಕಿಕೊಳ್ಳದೆಯೇ ಕೂಡು ಕುಟುಂಬದಲ್ಲೂ ನೆಮ್ಮದಿಯಿದೆ ಎಂಬುದನ್ನು ನವ ನಾಗರೀಕತೆಗೆ ಸಾರಿಹೇಳುವ ಸರದಿಯಲ್ಲಿದೆ. ದಿನ ದಿನಕ್ಕೂ ಸಂಕೀರ್ಣವಾಗುತ್ತಿರುವ ಕುಟುಂಬದ ಕುರಿತಾಗಿನ ಸಾಮಾಜಿಕ ದೃಷ್ಠಿಕೋನಕ್ಕೆ ಸಡ್ಡು ಹೊಡೆದು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಇವರ ಮನೆಗೆ ಸೊಸೆಯಂದಿರಾಗಿ ಬಂದ ಹೆಣ್ಮಕ್ಕಳು ಹೇಳುವ ಪ್ರಕಾರ 'ತವರಿನಲ್ಲಿ ಒಬ್ಬೊಬ್ಬರೇ ಇದ್ದು ಬೇಸರಬಂದುಹೋಗಿತ್ತು.ಇಲ್ಲಿ ಎಲ್ಲರೂ ಕೂಡಿ ಬದುಕುತ್ತಿರುವುದರಿಂದ ದಿನಕಳೆದದ್ದೇ ಗೊತ್ತಾಗುತ್ತಿಲ್ಲ...'


ಹಾಗೆ ನೋಡಿದರೆ ಇದು ವಿಭಕ್ತ ಕುಟುಂಬವೆನ್ನುವುದಕ್ಕೆ ಯಾವ ಪುರಾವೆಗಳೂ ಇಲ್ಲ.ಒಟ್ಟಿಗೆ ಮುಂಜಾನೆ ಏಳುವುದರಿಂದ ಹಿಡಿದು ಸಂಜೆವರೆಗಿನ ಪ್ರತಿಯೊಂದು ಕ್ಷಣವನ್ನೂ ಒಟ್ಟಿಗೆ ಕಳೆಯುತ್ತಾರೆ.ನೀ ನನಗಿದ್ದರೆ ನಾ ನಿನಗೆ... ಅಕ್ಷರಶಃ ನಿಜವಾಗಿದೆ ಈ ಮಾತು ಇಲ್ಲಿ. ಒಂದೇ ಮನೆಯ ಜನರಂತೆ ಇವರು ಬದುಕುತ್ತಿರುವುದಕ್ಕೋ ಎನೋ ಇಲ್ಲಿ ಪ್ರತಿಯೊಬ್ಬರಲ್ಲೂ ಅವಿನಾಭಾವ ಮೈತ್ರಿಯಿದೆ.ಹೊಂದಾಣಿಕೆಯಿದೆ.ನಾವು ಏನೇ ಮಾಡುವುದಿರಲಿ, ಕೂಡಿಕೊಂಡೇ ಮಾಡ್ತೀವಿ. ನಮಗೆ ಹೀಗೇ ಇರೋದು ತುಂಬಾನೇ ಇಷ್ಟ ಅನ್ನುತ್ತಾರೆ ಈ ಮನೆಯ ಮಕ್ಕಳ ಪೈಕಿ ಹಿರಿಯ ನಾರಾಯಣ ಗೌಡ.ಇದೇ ಮತಿಗೆ ತಮ್ಮಂದಿರೂ ಹ್ಞೂಂ ಗುಡುತ್ತಾರೆ.

ವ್ಯಾವಹಾರಿಕವಾಗಿ ಮೂರು ಮನೆಗಳಾಗಿವೆಯೇನೋ ನಿಜ.ಆದರೆ ಮನೆ ಮಾತ್ರ ಭಾಗವಾಗಿಲ್ಲ. ಕೃಷಿಯನ್ನೇ ನಂಬಿಕೊಂಡು ಬದುಕುತ್ತಿರುವ ಇವರು ತಮ್ಮೆಲ್ಲಾ ಕೆಲಸಗಳನ್ನು ತಾವೇ ನಿರ್ವಹಿಸಿಕೊಳ್ಳುತ್ತಾರೆ. ಎಲ್ಲರ ಜಮೀನುಗಳಲ್ಲಿ ಎಲ್ಲರೂ ಶ್ರಮಿಸುತ್ತಾರೆ.ಒಂದೇ ಒಂದು ವರ್ಷವೂ ನಮ್ಮ ಕೆಲಸ ಆಳುಗಳಿಲ್ಲದೆಯೇ ಹಿಂದೆ ಉಳಿದದ್ದಿಲ್ಲ ಎನ್ನುವ ಮಾತು ಇವರದ್ದು.ಮನೆಯ ಅಷ್ಟೂ ಜನ ಹೊಲಕ್ಕಿಳಿದು ದುಡಿಯುತ್ತಾರೆ.ಗಂಡಿರಲೀ ಹೆಣ್ಣಿರಲಿ ತಮ್ಮ ಕೆಲಸವನ್ನು ತಾನು ಮಾಡುತ್ತ ನಿರಂತರವಾಗಿ ಮನೆಯ ನೆಮ್ಮದಿಯನ್ನು ಕಾಯ್ದುಕೊಂಡುಹೋಗುವ ಸಲುವಾಗಿ ಇವರೆಲ್ಲರ ಧ್ಯಾನ ! ಅದೇ ರೀತಿ ಖುಷಿಯಿಂದ ಇರುತ್ತಾರೆ.ಇಲ್ಲಿಯ ಉದ್ದಾನುದ್ದ ಪಡಸಾಲೆಯ ಮೇಲೆ ಮಧ್ಯಾಹ್ನವನ್ನು ಕಳೆಯುವುದೇ ಒಂದು ರೋಂಮಾಂಚಕ ಅನುಭವ. ಚಿಕ್ಕವರು,ದೊಡ್ಡವರು ಎಲ್ಲರೂ ಬಂದು ಟಿ,ವಿ.ಯ ಮುಂದೆ ಆಸೀನರಾದರೆ ಅಲ್ಲಿ ಹುಟ್ಟುವ ಮಾತುಗಳು ಸ್ವಾರಸ್ಯ ಕಳೆದುಕೊಂಡ ದಿನಗಳಿಲ್ಲ.ಏನಾದರೊಂದು ಹೊಸ ವಿಷಯದೊಂದಿಗೆ ಶುರೂವಾಗುವ ಮಾತುಗಳು ಸದಾ ಕುತೂಹಲವನ್ನು ಜತೆ ಜತೆಯಾಗಿಯೇ ಇಟ್ಟುಕೊಂಡೇ ಮುಂದುವರೆಯುತ್ತವೆ.


ಇದೆಲ್ಲಕ್ಕಿಂತ ಹೆಚ್ಚಾಗಿ ಇಲ್ಲಿಯ ಸೊಸೆಯಂದಿರನ್ನು ಮಾತನಾಡಿಸಬೇಕು.ಅತ್ತೆಯರ ಹಾದಿಯಲ್ಲಿ ನಡೆಯುತ್ತೀವಿ ಅನ್ನುತ್ತಾರೆ.ಅತ್ತೆಯಂದಿರು ಈ ಮನೆಗೆ ಕಾಲಿರಿಸಿ ಸುಮಾರಿಗೆ ಅರವತ್ತು ವರ್ಷಗಳೆ ಸಂದಿರಬೇಕು.ಇಲ್ಲೇ ದುಡಿದು, ದಣಿದು,ಬೆಳೆದು ಮಾಗಿದ ಜೀವಗಳವು.ಅವರ ಮಾತಿಗೆ ತಪ್ಪುವುದುಂಟೇ ಎನ್ನುತ್ತಾಳೆ ಈ ಮನೆಯ ಸೊಸೆ ಲಕ್ಷ್ಮಿ.ಯಾವುದೇ ಅಸಮಾಧಾನ ಉಂಟಾದರೂ ಇಲ್ಲಿ ಮಾತು,ಸಮಾಲೋಚನೆಗಳೇ ಅವನ್ನು ಬಗೆಹರಿಸುತ್ತವೆ.ಅತ್ತೆಸೊಸೆಯಂದಿರ ಮಧ್ಯೆ ಈ ನಂಬಿಕೆ ಬೆಳೆದ ಕಾರಣದಿಂದ ಲಾಗಾಯ್ತಿನಿಂದಲೂ ಇಲ್ಲಿ ಮಹಾ ಸಮರಗಳು ನಡೆದೇ ಇಲ್ಲ..ಇದು ಭಾರತಿ ತನ್ನ ಕುಟುಂಬವನ್ನು ತೆರೆದಿಡುವ ರೀತಿ.

ಇಂದಿನ ಸಮಾಜದಲ್ಲಿ ಅದರಲ್ಲೂ ಹೆಣ್ಣು ಹೆತ್ತವರಲ್ಲಿ ಸಾಮಾನ್ಯವಾಗಿ ಒಂದು ಗುಂಗೀ ಹುಳು ಕೊರೆಯುತ್ತಿರುತ್ತದೆ.ತನ್ನ ಮಗಳನ್ನು ಕೂಡುಕುಟುಂಬಕ್ಕೆ ಸೊಸೆಯಾಗಿ ಕಳುಹಿಸಿದರೆ ಅಲ್ಲಿ ಅವಳು ಕೆಲಸ ಮಾಡಿ ಮಾಡಿಯೇ ಸೊರಗುತ್ತಾಳೆ.ಅವಳನ್ನು ಒಬ್ಬನೇ ಮಗನಿರುವ ಕಡೆಗೆ ಸೊಸೆಯಾಗಿ ಕಳುಹಿಸಬೇಕು ಎಂಬ ವಿಚಾರಗಳಿರುತ್ತವೆ.ಹಾಗಾಗಿ ಅವಳ ಮದುವೆಯ ಪ್ರಸ್ತಾಪದ ಜೊತೆಯಲ್ಲಿಯೇ ಒಂದೇ ಮಗನಿರಬೇಕು,ತಂದೆ ಇದ್ದರೂ ಪರವಾಗಿಲ್ಲ,ತಾಯಿಯಿರಬಾರದು(!)ತಂದೆ ತಾಯಿ ಇಬ್ಬರೂ ಇದ್ದರೂ ಹೇಗಾದರೂ ಹೊಂದಿಕೊಳ್ಳಬಹುದು, ಆದರೆ ಅತ್ತಿಗೆಯಂದಿರು ಇದ್ದರೆಂದರೆ ತನ್ನ ಮಗಳನ್ನು ಅವರ ಮನೆಗೆ ಸೊಸೆಯಾಗಿ ಕಳಿಸೋದಿಲ್ಲ ಹೀಗೆ ನಾನಾ ಬಗೆಯ ನಿಬಂದನೆಗಳು ಶುರುವಾಗುತ್ತವೆ.ಇದೆಲ್ಲಾ ನಿಬಂದನೆಗಳು ಪೂರೈಸಿದಮೇಲೂ ಗಂಡು ಹಾಗೂ ಹೆಣ್ಣಿನ ನಡುವೆ ಸಂಭವಿಸುವ ಬಿರುಕಿನ ಬಗ್ಗೆ ಸಾವಿರದೆಂಟು ನಿರೂಪುಗಳು ಸಿಗುತ್ತವೆ.ಕೊಪ್ಪಲಗದ್ದೆಯ ಗೌಡರ ಮನೆಯ ಮದುವೆ ಸಂದರ್ಭಗಳಲ್ಲಿ ಇಂತಹ ಪರಿಸ್ತಿತಿ ಎದುರಾಗಿತ್ತೇ ಎಂದು ಕೇಳಿದರೆ ವಿನಾಯಕ ಗೌಡರು ಹೇಳುವ ಮಾತು.. ಇಷ್ಟು ಮದುವೆಯಾಯ್ತು ನಮ್ಮನೇಲಿ.. ಒಂದೇ ಒಂದು ಹೆಣ್ಣಿನ ತಂದೆ ಸಹ ಈ ರೀತಿಯ ಕೊಂಕು ತಗೆದಿಲ್ಲ.ಇಂದಿಗೂ ಕೂಡ ನಮ್ಮಜೊತೆ ಉತ್ತಮ ಒಡನಾಟವನ್ನು ಇಟ್ಟುಕೊಂಡಿದ್ದಾರೆ.ಅವರಿಗೂ ಅವರ ಹೆಣ್ಮಕ್ಕಳು ಇಲ್ಲಿ ಖುಷಿಯಿಂದ ಇರುವುದನ್ನು ನೋಡಿ ಸಂತಸವಿದೆ.ಇಲ್ಲಿ ಎಲ್ಲರೊಂದಿಗೆ ಒಂದಾಗಿ ಎಲ್ಲ ಸಂದರ್ಭಗಳನ್ನು ಎದುರಿಸುವ ಪಾಠವನ್ನು ಇವರು ಕಲಿಯುತ್ತಿದ್ದರೆ ಯಾವ ತಂದೆ ತಾಯಿ ತಾನೇ ನೋವು ಮಾಡಿಕೊಳ್ಳುತ್ತಾರೆ ಹೇಳಿ...

ಇವರ ಮನೆಯ ಮದುವೆ ಸಂದರ್ಭಗಳನ್ನು ಕೇಳಿದರೆ ಈಗೆರಡು ವರ್ಷಗಳ ಹಿಂದೆ ನಡೆದ ಸಿನಿಮೀಯ ಘಟನೆಯನ್ನು ವಿವರಿಸುತ್ತಾರೆ. ಯಾವ ಗುಟ್ಟನ್ನೂ ಮುಚ್ಚಿಟ್ಟುಕೊಳ್ಳುವ ಜಾಯಮಾನದವರಲ್ಲ ಇಲ್ಲಿಯವರು.'ನಮ್ಮ ಮನೆಯ ಹುಡುಗನೊಂದಿಗೆ ಮದುವೆ ಗೊತ್ತಾದ ಹುಡುಗಿಯೊಬ್ಬಳು ನಾಪತ್ತೆಯಾಗಿರುವುದಾಗಿ ಸುದ್ದಿ ಬರುತ್ತದೆ.ಇದನ್ನು ತಿಳಿದು ನಾವಲ್ಲಿಗೆ ಹೋದರೆ ಅದೊಂದು ಕಟ್ಟು ಕತೆ.ಅಂತೂ ಬೀಗರಾಗುವವರೊಂದಿಗೆ ಮತುಕತೆ ಮುಗಿಸಿಕೊಂಡು ಬಂದೆವು. ಆದರೆ ಮತ್ತೆರಡೇ ದಿನಕ್ಕೆ ಮತ್ತದೇ ಸುದ್ದಿ.ಈ ಬಾರಿಯೂ ಅದು ನಿಜವಾಗಲಿಲ್ಲವಾದರೂ ಅವರ ಮನೆಗೆ ತೆರಳಿ ಹೀಗೆಲ್ಲಾ ಸುದ್ದಿಯ ಕುರಿತು ವಿಚಾರಣೆ ಮಾಡಿಕೊಂಡು ಬಂದದ್ದಾಯಿತು.ಮದುವೆಯ ದಿನ ಬಂದೇ ಬಿಟ್ಟಿತು.ನೆಂಟರೆಲ್ಲ ಬಂದಿದ್ದರು. ಇನ್ನೇನು ಮಹೂರ್ತ ಬಂದೇ ಬಿಟ್ಟಿತು.ಅಷ್ಟೊತ್ತಾದರೂ ಹಣ್ಣಿನ ಕಡೆಯವರು ಬಂದೇ ಇಲ್ಲ. ಎಷ್ಟು ಕಾದರೂ ಬರಲೇ ಇಲ್ಲ.ಆಗ ನಮ್ಮ ಮನೆಯ ಮರ್ಯಾದೆ ಕಾಪಾಡಿದವಳು ನೇತ್ರಾವತಿ ಎಂಬ ಹೆಣ್ಮಗಳು.ಸಂಭಂಧಿಕರೊಬ್ಬರ ಮಾತಿನ ಮೇರೆಗೆ ತತ್ಕ್ಷಣದಲ್ಲಿ ಹಸೆಮಣೆಯೇರಿದಳು.ಇಂದು ನಮ್ಮೆಲ್ಲರೊಂದಿಗೆ ಚೆನ್ನಾಗಿ ಬೆರೆತಿದ್ದಾಳೆ.ಅವಸರದಲ್ಲಿ ನಮ್ಮವಳಾದರೂ ನಮ್ಮ ಕುಟುಂಬವನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾಳೆ.ಈ ನೆಮ್ಮದಿಯ ಹಿಂದೆ ಒಬ್ಬರನ್ನೊಬ್ಬರು ಪರಸ್ಪರ ಅರ್ಥೈಸಿಕೊಳ್ಳುವುದರ ಪಾಲು ಬಲು ದೊಡ್ಡದಿದೆ.

ಇದೆಲ್ಲಾ ಒತ್ತಟ್ಟಿಗಿರಲಿ,ಇವರ ನಡುವೆ ಭಾಂದವ್ಯ ಇರುವ ರೀತಿಯನ್ನು ನೋಡಿದರೆ ಅಚ್ಚರಿ...ಇಲ್ಲಿಯ ನಾಲ್ಕು ಅಂಕಣದ ದೊಡ್ಡ ಮನೆಯಲ್ಲಿ ಗೋಡೆಗಳ ಸಂಖ್ಯೆ ತುಂಬಾ ಕಡಿಮೆ.ಮನೆಯಲ್ಲೂ ಮನದಲ್ಲೂ ಗೋಡೆಗಳು ಇಲ್ಲಿ ತುಂಬಾ ಕಡಿಮೆ.ಮೂರು ಪ್ರತ್ಯೇಕ ಸಂಸಾರಗಳಿದ್ದರೂ ಒಂದೇ ಮನೆಯಲ್ಲಿ ಸಾಂಗವಾಗಿ ಸಾಗುತ್ತಿವೆ.ಉದ್ದಾನುದ್ದ ಪಡಸಾಲೆ.ಒಳಜಗುಲಿಗೂ ಗೋಡೆಯ ಹಂಗಿಲ್ಲ.ಅಲ್ಲಿಂದ ಹೆಬ್ಬಾಗಿಲ ಮೂಲಕ ಒಳಹೊಕ್ಕರೆ ಅಲ್ಲೂ ಮೂರು ಸಬಂಧ ಒಳ ಕೋಲಿ. ಮುಂದೆ ದೇವರ ಮನೆ ಮಾತ್ರ ಮೂರು ಪ್ರತ್ಯೇಕವಾಗಿದ್ದದ್ದು ಬಿಟ್ಟೆರೆ,ಅಡುಗೆ ಮನೆಯೂ ಕಡ ಒಂದೇ ಇದೆ.ಆದರೆ ದಿನವೂ ಬೇರೆ ಬೇರೆ ಅಡುಗೆ ಮಾಡಿದರೂ ಸಹ ಅದನ್ನು ಹಂಚಿಕೊಳ್ಳುವುದು ರೂಢಿ. ವರ್ಷಕ್ಕೆ ಹೊಸಕ್ಕಿ ಹಬ್ಬ,ದೀಪಾವಳಿ,ಆರಧೃ ಮಳೆ ಹಬ್ಬ , ಚೌತಿ, ತುಳಸಿ ಹಬ್ಬ ಹಾಗೂ ಮದುವೆ ಮುಂತಾದ ವಿಶೇಷ ಸಂದರ್ಭಗಳಲ್ಲಿ ಎಲ್ಲರೂ ಒಂದೇ ಕಡೆ ಸೇರಿ ಊಟ ಮಾಡುತ್ತಾರೆ.ಪ್ರತಿ ನಿತ್ಯವೂ ಎಲ್ಲರಮನೆಯಲ್ಲೂ ಒಂದೇ ಸಲ ಊಟಕ್ಕೆ ತೆರಳುವ ರೂಡಿಯೂ ಇದೆಯಂತೆ.!

ಇದೆಲ್ಲಕ್ಕಿಂತ ಹೆಚ್ಚಿನದಾಗಿ ಇಲ್ಲಿ ಪ್ರತಿಯೊಂದು ಸೌಲಭ್ಯ ಕೂಡ ಒಂದೇ ಇರುವುದು ಇನ್ನೊಂದು ಸೋಜಿಗ.ಮನೆಯಂಗಳದಲ್ಲಿ ತುಳಸಿ ಕಟ್ಟೆ ಒಂದೇ ಇದೆ.ಬಾವಿ ಸಹ ಒಂದೇ ಇದೆ. ಮನೆಯ ಹಿಂದುಗಡೆ ಒಂದೇ ಕೊಟ್ಟಿಗೆಯಲ್ಲಿ ದನಗಳನ್ನು ಸಾಕುತ್ತಾರೆ. ಇವರ ಮನೆಯ ಟೆಲಿಪೋನ್ ಸಹ ಒಂದೇ ಇದೆ. (08384-247627) ಪೋನ್ ಹೊರಗಡೆಯೇ ಇರೋದ್ರಿಂದ ನಾವೆಲ್ಲಿಗೇ ಹೋದ್ರೂ ಯಾರಾದ್ರೂ ಎತ್ತಿ ಮಾತನಾಡಬಹುದು, ಆಮೇಲೆ ವಿಷಯ ಕೇಳ್ಕೊಂಡ್ರೆ ಆಯ್ತಪ್ಪಾ ಅನ್ನುತ್ತಾರೆ ಅಶೋಕ ಗೌಡ.

ಮುಂದೆಯೂ ಕೂಡ ಇದೇ ರೀತಿ ಇರುವಂತೆ ದೇವರು ನಮ್ಮ ಮಕ್ಕಳಿಗೆ ಶಕ್ತಯನಗನು ಕೊಡಲಿ ಅನ್ನುತ್ತಾರೆ ಇಲ್ಲಿಯ ಪ್ರತಿಯೊಬ್ಬರೂ ಸಹ.ಯಾವುದೇ ಸ್ವಾರ್ಥವಿಲ್ಲದ ಬದುಕಿನ ವಾಸ್ತಾವಾಂಶಗಳನ್ನು ಸಹಜವಾಗಿ ಸ್ವೀಕರಿಸುತ್ತ ಸಂಬಂಧಗಳಿಗೆ ಪ್ರಾಶಸ್ತ್ಯವನ್ನು ಕೊಡುವ ಇವರಬದುಕು ನಿಜಕ್ಕೂ ಅನುಕರಣೀಯ.

ದಿನದಿಂದ ದಿನಕ್ಕೆ ಮನುಷ್ಯನೆಂಬೋ ಮನುಷ್ಯ ಈ ಬದುಕು ಕೇವಲ ಸ್ವಂತದ್ದು. ತಾನು ಮನ ಬಂದಂತೆ ಬದುಕುತ್ತೇನೆ ಎಂದು ಸಂಬಂಧಗಳನ್ನು ಕಡೆಗಣಿಸಿ ತನ್ನಸುತ್ತ ತಾನೇ ಜೇಡದಂತೆ ಬಲೆ ನೇಯ್ದುಕೊಳ್ಳುತ್ತಿದ್ದಾನೆ.ಇದರ ಪರಿಣಾಮವಾಗಿ ಸಂಕುಚಿತನಾಗುತ್ತಾ ಆಗುತ್ತಾ ಜೀವನದ ನೈಜ ಸಂವೇದನೆಗಳನ್ನು ಕಳೆದುಕೊಳ್ಳುತ್ತಿದ್ದಾನೆ.ಬೇರೊಬ್ಬನ ಸಲುವಾಗಿ ಒಂದು ಚಿಕ್ಕ ಹೊಂದಾಣಿಕೆಯನ್ನೂ ಸಹ ಮಾಡಿಕೊಳ್ಳಲು ತಯಾರಿಲ್ಲದ ಪರಿಸ್ಥಿತಿಯಲ್ಲಿ ಇಂದಿನ ಹೊಸ ತಲೆಮಾರೆಂಬ ಪ್ರಭೃತಿಗಳು ತಯಾರಾಗುತ್ತಿವೆ. ಇಂತದ್ದರಲ್ಲಿ ಒಂದೇ ಮನೆಯಲ್ಲಿ ಮೂರು ಪ್ರತ್ಯೇಕ ಕುಟುಂಬಗಳು ಒಂದಾಗಿ ಜೀವಿಸುತ್ತ ಆಧುನಿಕ ಜೀವನಕ್ರಮಗಳೆಂಬ ಜೈಲಿನಿಂದ ಬಿಡಿಸಿಕೊಳ್ಳಲು ಸದಾ ಕಾಲ ತುಡಿಯುತ್ತಿದ್ದಾರೆ.ಇವರ್ಯಾಕೆ ನಮ್ಮ ಬದುಕಿನ ಆದರ್ಶವಾಗಬಾರದು?
3 ಕಣ್ಣುಗಳು...

ಈ ಸಾಮರಸ್ಯದ ಬದುಕಿಗೆ ದೇವಕಿ,ಮಾದೇವಿ,ಬಂಗಾರಿ ಇವರು ಮೂರು ಕಣ್ಣುಗಳಿದ್ದಂತೆ.ಒಂದೊಂದು ಕುಟುಂಬಕ್ಕೆ ಒಬ್ಬೊಬ್ಬರಂತೆ ಹಿರಿಯ ಸಾರಥಿಗಳು.. ಕರಿಯಾ ಹುಲಿಯಾ ಗೌಡರ ಸೊಸೆಯಂದಿರಾಗಿ ಈ ಮನೆಯ ಪ್ರವೇಶ ಪಡೆದ ಇವರ ವಂಶಬಳ್ಳಿ ಬೆಳೆದು ಇಂದಿಗೆ ಐವತ್ತು ಜನರನ್ನು ದಾಟಿದೆ. ಮಕ್ಕಳು,ಮೊಮ್ಮಕ್ಕಳನ್ನು ಕಂಡ ಈ ಹಿರಿಯ ಜೀವಗಳು ಈ ಮನೆಯ ಸಾಮರಸ್ಯದ ರೂವಾರಿಗಳು. ಹತ್ತು ಸೊಸೆಯರೊಂದಿಗೆ ನೆಮ್ಮದಿಯಿಂದ ಜೀವನ ಸಾಗಿಸುತ್ತಿರುವ ಇವರನ್ನು ಮಾತನಾಡಿಸಿದರೆ ಸೊಸೆಯಂದಿರ ಬಗ್ಗೆ ಹೆಮ್ಮೆಯ ಮಾತು ಹೊರಬೀಳುತ್ತದೆ.ಎಲ್ಲೆಲ್ಲಿಂದಲೋ ಬಂದವರು ಹೊಂದಿಕೊಂಡು ಹೋಗ್ತಾರೋ ಇಲ್ಲವೋ....ಅನ್ನುವ ಆತಂಕ ಮೊದಮೊದಲು ಕಾಡಿತ್ತಾದರೂ ಎಲ್ಲ ಸೊಸೆಯಂದಿರು ಹೊಂದಿಕೊಂಡಿದ್ದು ನೋಡಿ ಖುಷಿಯಾಯಿತು.ಎಲ್ಲಾದರೂ ಚಿಕ್ಕಪುಟ್ಟ ಸಮಸ್ಯೆಗಳು ತಲೆದೋರಿದರೆ ಕುಳಿತು ಮಾತನಾಡಿ ಬಗೆಹರಿಸಿಕೊಳ್ಳುತ್ತೇವೆ. "ನಾವು ಬಲ್ಲಾದೋರು ತಿಳಿಸಿ ಹೇಲಿದ್ರೆ ತಾನೇ ಕಿರೀರು ಅರ್ಥ ಮಾಡಿಕಳ್ಳಾದೂ... ಅದರಂತೆ ನಡಿಯಾದೂ..." ಅನ್ನುತ್ತಾರೆ.ಕುಟುಂಬ ಮೂರಾದರೂ ಮನಸ್ಸು ಒಂದೇ.ಇದುವೇ ಈ ಸಂಸಾರದ ಸಂತೋಷದ ಕೀಲಿಕೈ.ಇಂದಿನ ಸಮಾಜದ ಕೌಟುಂಬಿಕ ವ್ಯವಸ್ಥೆ ಇಂತಹ ಸಾವಿರ ಸಂತಸದ ಸಂಗತಿಗಳಿಂದ ಗಾವುದ ಗಾವುದ ದೂರ ಸರಿದಿದೆ.ಅಲ್ಲವೇ?
3 ಹೆಸರಿನ ಆರು ಮಂದಿ!

ಹೌದು! ಸಾಮಾನ್ಯವಾಗಿ ಇಷ್ಟು ದೊಡ್ಡ ಕುಟುಂಬದಲ್ಲಿ ಒಂದೇ ಹೆಸರಿನ ಇಬ್ಬರು ಇದ್ದರೆ ಅವರನ್ನು ಹೇಗೆ ಕರೆದುಕೊಳ್ಳುತ್ತಾರೆ.. ಮಾತನಾಡಿಸಿಕೊಳ್ಳುತ್ತಾರೆ... ಎಂಬ ಸಹಜ ಕುತೂಹಲದಿಂದ ಕೇಳಿದರೆ,ಒಂದಲ್ಲ ಎರಡಲ್ಲ..ಮೂರು ಹೆಸರಿನ ಆರು ಮಂದಿಯಿದ್ದಾರೆ!ಭಾರತಿಯಂದಿರಿಬ್ಬರು,ಮತ್ತಿಬ್ಬರು ಪಾರ್ವತಿಯಂದಿರು.ನೇತ್ರಾ ಎಂಬ ಸೊಸೆಯಂದಿರಿಬ್ಬರು.ಒಟ್ಟೂ ಆರು ಮಂದಿ.ಹಿರಿ ಸೊಸೆಗೆ ದೊಡದಡ ಪರ್ವತಿ ಅಂದರೆ ಕಿರಿಯ ಸೊಸೆಗೆ ಸಣ್ಣ ಪಾರ್ವತಿ ಅಂತ ಕರೆದುಕೊಳ್ಳುತ್ತಾರೆ.ಒಂದೇ ಒಂದು ದಿವಸವೂ ಒಬ್ಬರನ್ನು ಕರೆದರೆ ಇನ್ನೊಬ್ಬರು 'ಓ'ಗೊಟ್ಟ ಪ್ರಸಂಗ ನಡೆದಿಲ್ಲ ಅನ್ನುತ್ತಾರೆ ಗೌಡರ ಮನೆಯ ಸಣ್ಣ ನೇತ್ರಾ!

ಅಹಾ..3 ಚಹಾ!ಮೂರು ಕುಟುಂಬಗಳು ಒಟ್ಟಾಗಿ ಜೀವನಸಾಗಿಸುತ್ತಿರುವ ಕುತೂಹಲದ ಸಂಗತಿಯ ಮಾಹಿತಿಯ ಜಾಡು ಹಿಡಿದು ಕೊಪ್ಪಲಗದ್ದೆಗೆ ತೆರಳಿದಾಗ ಮದ್ಯಾಹ್ನದ ಉರಿ ಬಿಸಿಲು.ನಾಲ್ಕಾರು ಮಹಿಳೆಯರು ಅಂಗಳದಲ್ಲಿ ಅಡಿಕೆ ಸುಲಿಯುತ್ತಿದ್ದರು.ನಮ್ಮನ್ನು ಅವರಿಗೆ ಪರಿಚಯಿಸಿಕೊಂಡು ನಮಗೆಅಗತ್ಯವಿದ್ದ ಮಾಹಿತಿಗಳನ್ನು ಪಡೆದುಕೊಂಡ ನಂತರ ಹೊರಟರೆ ಏಕಕಾಲಕ್ಕೆ ಮೂರೂ ಮನೆಗಳಿಂದ ಚಹಾ ಮಾಡಿಕೊಂಡು ನಮ್ಮೆದುರಿನ ಟೇಬಲ್ಲಿನ ಮೇಲೆ ತಂದಿಟ್ಟರು.!ಅದ್ಯಾವ ಅವಸರದಲ್ಲಿ ಮಾಡಿಕೊಂಡು ಬಂದರೋ ಗೊತ್ತಿಲ್ಲ.ಈಗೀಗ ನಮ್ಮಜೊತೆ ಮಾತಾಡುತ್ತಿದ್ದವರು ಹೋಗಿ ಚಹಾ ತಯಾರಿಸಿ ತಂದಿದ್ದರೆ ನಮಗೆ ಕುಡಿಯಲೂ ಆಗದೇ, ಬಿಟ್ಟು ಹಾಗೇ ಎದ್ದು ಬರಲಿಕ್ಕೂ ಆಗದ ಸಂಕಟ.ನಾಗರಾಜ,ವೈದ್ಯ,

2 comments: